Friday, April 10, 2020

ಸಂಕೋಲೆ..

ಮನಸೇ ಎಲ್ಲಿ ನಡೆದೇ
ಹೇಳದೆ ಕೇಳದೆ..?
ಕಳೆದೋದ ಮನಸ
ನಾನು ಕೇಳಿದೆ.. 

ನಾ ಹೊರಟೆ ನನ್ನ 
ಮನಸ ಅರಸುತಾ.. 
ನನ್ನೊಳಗಿಹ ನನ್ನವರ 
ಸನಿಹ ಬಯಸುತಾ.. 
ಎಂದಿತೆನ್ನ ಮನ. 

ನೀನಿದ್ದರೂ ನನ್ನೊಡನೆ
ನಾ ಒಂಟಿಯೇ..
ನಿನ್ನ ಪ್ರೀತಿಯ ಜೊತೆಗೆ 
ಇರಲೆನ್ನ ಬಯಕೆ..
ನುಡಿಯಿತು ಮನವು.. 

ನನಗೂ ಆಸೆಯಿದೆ 
ನನ್ನವರ ಜೊತೆಗಿರಲು
ಹೇಗಿರಲಿ ನಾನು
ನೀನೊಬ್ಬನೇ ಹೊರಟಿರಲು..
ನನ್ನೂ ಜೊತೆ ಕರೆದೊಯ್ಯು
ನಿನ್ನ ದಮ್ಮಯ್ಯ.. ಬೇಡಿದೆ ನಾನು.

ಪರಿಸ್ಥಿತಿಯ ಸಂಕೋಲೆಯಲ್ಲಿ 
ಬಂಧಿ ನೀನು, 
ನಿನ್ನ ಕಾದು ಕುಳಿತರೆ 
ಹೇಗೋ ಏನೋ..
ನಾನಂತೂ ಹೊರಡುವೆ ಇನ್ನು.. 
ಹೇಳಿ ತೊರೆಯಿತು ಮನಸು.. 

ನನ್ನವರ ನೆನೆದು
ಮನಸನ್ನ ಕರೆದು
ಕಾಲವ ಜರಿದು
ಕಂಬನಿಗೊರಗಿದೆ ಮೌನಕೆ ಸರಿದು.. 

- ರೋಹಿತ್

Thursday, April 9, 2020

ಕರೋನಾ ಸೋಂಕಿನ ಬಗ್ಗೆ ತಜ್ಞರು ಹೇಳೋದೇನು?


ಅಮೇರಿಕಾ ದೇಶದ ಸಾಂಕ್ರಾಮಿಕ ರೋಗಗಳ ಪ್ರಮುಖ ತಜ್ಞ ಎಂದು ಹೆಸರುವಾಸಿಯಾಗಿರುವವರು ಖ್ಯಾತ ವೈದ್ಯ ಹಾಗೂ ಇಮ್ಯುನಾಲಜಿಸ್ಟ್, ಡಾ|| ಅಂತೋಣಿ ಸ್ಟೀಫನ್ ಫೌಚಿ. ಅಮೇರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನ ಪ್ರಖ್ಯಾತ ಸಂಶೋಧನಾ ಸಂಸ್ಥೆಗಳಲ್ಲೊಂದಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಸಿಯಸ್ ಡಿಸೀಸಸ್ (ರಾಷ್ಟ್ರೀಯ ಅಲೆರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆ) ನ ನಿರ್ದೇಶಕರಾಗಿ ೧೯೮೪ ರಿಂದ ಕರ್ತವ್ಯ ನಿರ್ವಹಿಸುತ್ತಿರುವ ಡಾ|| ಅಂತೋಣಿ ಫೌಚಿ ರವರು ೫೦ ವರ್ಷಗಳಿಗೂ ಹೆಚ್ಚು ಕಾಲದಿಂದ ಸಾಂಕ್ರಾಮಿಕ ರೋಗಗಳ ಕುರಿತ ಸಂಶೋಧನೆ ಮತ್ತು ಸಾರ್ವಜನಿಕ ಅರೋಗ್ಯ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.  ಡಾ|| ಫೌಚಿ ರವರು ನೇರ ನುಡಿಗೆ ಹೆಸರಾದವರು. ಅವರ ಮಾತನ್ನು ಅಮೇರಿಕಾ ಅಧ್ಯಕ್ಷರಿಂದ ಹಿಡಿದು ಇಡೀ ದೇಶದ ಜನ ಕೇಳುತ್ತಾರೆ ಎನ್ನುವುದು ಯುಎಸ್ ನ ಮಾಧ್ಯಮಗಳ ಅಂಬೋಣ. ಇದು ಅವರ ಅನುಭವ ಮತ್ತು ಪರಿಣತಿಗೆ ಹಿಡಿದ ಕನ್ನಡಿ. ಹಾಗಾಗಿ, ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ದೇಶದಲ್ಲಿ ಕರೋನ ಸ್ಪೋಟದ ನಿರ್ವಹಣೆಗೆ ಪ್ರಸ್ತುತ ರಚಿಸಿರುವ 'ಕರೋನ ಟಾಸ್ಕ್ ಫೋರ್ಸ್' ನ ಮುಖ್ಯ ಸದಸ್ಯರಾಗಿ ಇವರನ್ನು ನೇಮಿಸಿದೆ. ತಮ್ಮ ವೃತ್ತಿ ಜೀವನದಲ್ಲಿ ಹೆಚ್.ಐ.ವಿ., ಸಾರ್ಸ್ (SARS- Severe Acute Respiratory Syndrome), MERS (Middle East Respiratory Syndrome) ಮತ್ತು ಎಬೋಲಾ ದಂತಹ ಸೋಂಕುಗಳು ಹಾಗೂ ಆಂಥ್ರಾಕ್ಸ್ ಜೈವಿಕ ಭಯೋತ್ಪಾದನಾ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ ಅನುಭವವಿರುವ ಡಾ|| ಫೌಚಿ ರವರು ಪ್ರಸ್ತುತ ಕರೋನಾ ಸೋಂಕಿನ ಕುರಿತು ವಿಡಿಯೋ ಸಂದರ್ಶನದಲ್ಲಿ ನೀಡಿರುವ ವಿವರಗಳ ಆಯ್ದ ಭಾಗದ ಭಾವಾನುವಾದ ಇಲ್ಲಿದೆ. 

ಸಂದರ್ಶಕ: ಹೆಚ್.ಐ.ವಿ., ಸಾರ್ಸ್, MERS, ಎಬೋಲಾ, ಜ್ಹಿಕಾ ದಂತಹ ಹಲವಾರು ಸಾಂಕ್ರಾಮಿಕ ರೋಗಗಳ ಕುರಿತು ಅಮೇರಿಕಾದ ೬ ಅಧ್ಯಕ್ಷರಿಗೆ ಸಲಹೆಗಳನ್ನು ನೀವು ನೀಡಿದ್ದೀರಿ. ಈ ಎಲ್ಲಾ ಸೋಂಕುಗಳಿಗಿಂತ ಕರೋನ ವೈರಸ್ ಹೇಗೆ ಭಿನ್ನ? 

ಡಾ|| ಫೌಚಿ: ಹೊರಹೊಮ್ಮುತ್ತಿರುವ ಸೋಂಕುಗಳಲ್ಲಿನ ಯಾವ ವಿಷಯ ನಿಮಗೆ ಹೆಚ್ಚು ಕಳವಳಪಡಿಸುತ್ತದೆ ಎಂದು ಬಹಳ ಸಮಯಗಳಿಂದ ಹಲವರು ನನಗೆ ಕೇಳುತ್ತಿದ್ದರು. ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡಬಲ್ಲ, ಹೆಚ್ಚು ಅಸ್ವಸ್ಥತೆ ಮತ್ತು ಮರಣ ಪ್ರಮಾಣ ಹೊಂದಿರುವ ಶ್ವಾಸಕೋಶ ಸಂಬಂಧಿತ ಸೋಂಕು ಯಾವಾಗಲೂ ಹೆಚ್ಚು ಅಪಾಯಕಾರಿ ಎಂದು ನಾನು ಹೇಳುತ್ತಿದ್ದೆ. ದುರದೃಷ್ಟವಶಾತ್ ಕರೋನ ಅಂತಹ ಒಂದು ಸೋಂಕು. ಕರೋನ ಸೋಂಕು ಕೆಲವು ವಿಷಯಗಳಲ್ಲಿ infuenza ತರಹವಿದ್ದರೂ, ಇತರ ವಿಷಯಗಳಲ್ಲಿ ತುಂಬಾ ವಿಭಿನ್ನವಾಗಿದೆ. ಎಬೋಲಾ ಒಂದು ಅತ್ಯಂತ ಭಯಾನಕ ಸೋಂಕಾಗಿದ್ದರೂ, ಅದು ತುಂಬಾ ಅಸ್ವಸ್ಥರಾಗಿರುವವರ (ಅಂದರೆ ರೋಗದ ಗುಣಲಕ್ಷಣ ಹೊಂದಿರುವವರ) ನಿಕಟ ಸಂಪರ್ಕ ಹೊಂದಿರುವವರಿಗೆ ಮಾತ್ರ ಹರಡುತ್ತದೆ. ಆದರೆ, ಕರೋನ ಸೋಂಕು ಅತ್ಯಂತ ಸುಲಭವಾಗಿ ಹರಡುತ್ತದೆ. ಸೋಂಕಿನ ಗುಣಲಕ್ಷಣವಿಲ್ಲದಿದ್ದವರೂ ಸಹ ಈ ಸೋಂಕನ್ನು ಇತರರಿಗೆ ಹರಡಬಲ್ಲರು. ಅಲ್ಲದೆ, ನಮಗೆಲ್ಲ ಯಾವಾಗಲೂ ಬಾಧಿಸುವ ಸಾಮಾನ್ಯ ಫ್ಲೂ ಜ್ವರದ ಮರಣ ಪ್ರಮಾಣ ಕೇವಲ ೦.೧% ಇದ್ದರೆ, ಕರೋನ ಸೋಂಕಿನ ಮರಣ ಪ್ರಮಾಣ ಇದಕ್ಕಿಂತ ಶೇಕಡ ೧೦ ರಷ್ಟು ಹೆಚ್ಚು, ಅಂದರೆ ಕನಿಷ್ಠ ೧% ಇದೆ. ಹಾಗಾಗಿ, ಕರೋನ ಬರಿ ಸುಲಭವಾಗಿ ಹರಡುವ ಸೋಂಕಲ್ಲದೆ, ಹೆಚ್ಚು ಬಾಧಿಸುವ ಅದರಲ್ಲೂ ಈಗಾಗಲೇ ಹೃದಯ ಮತ್ತು ಶ್ವಾಸಕೋಶ ಖಾಯಿಲೆಗಳು ಹಾಗೂ ಮಧುಮೇಹಗಳಂತಹ ಸಮಸ್ಯೆಗಳಿಂದ ನರಳುತ್ತಿರುವ ವಯೋವೃದ್ಧರಿಗೆ ಹೆಚ್ಚು ಜೀವಹಾನಿ ಉಂಟು ಮಾಡುವ ಸೋಂಕಾಗಿದೆ. ಹಾಗಾಗಿ, ಇದು ಇತರ ಸೋಂಕುಗಳಿಗಿಂತ ಭಿನ್ನ ಮತ್ತು ಅಪಾಯಕಾರಿ. 

ಸಂದರ್ಶಕ: ಆನ್ಲೈನ್ ಜಾಲತಾಣಗಳಲ್ಲಿ ಹಲವಾರು ವಿಷಯಗಳು ಹರಿದಾಡುತ್ತಾ, ಗೊಂದಲಗಳನ್ನು ಸೃಷ್ಟಿಸುತ್ತಿವೆ. ಇಂತಹ ಕೆಲವು ವಿಷಯಗಳ ಬಗ್ಗೆ ಚರ್ಚಿಸೋಣ. ಮೊದಲಿಗೆ ಈ ಸೋಂಕು ಹೇಗೆಲ್ಲಾ ನಮಗೆ ಬರಬಹುದು? ಆನ್ಲೈನ್ ನಲ್ಲಿ ಕೊಂಡುಕೊಂಡ ವಸ್ತುಗಳ ಪ್ಯಾಕೆಟ್ ಗಳನ್ನು ಮುಟ್ಟಬಹುದಾ? ಹೊರಗಡೆ ಮಾರುಕಟ್ಟೆಗಳಿಗೆ ಹೋದಾಗ ವಸ್ತುಗಳನ್ನು ಮುಟ್ಟಬಹುದಾ? ಎಷ್ಟು ದೂರ ಕರೋನ ವೈರಸ್ ಸಂಚರಿಸಬಹುದು? ಎನ್ನುವುದೆಲ್ಲದರ ಬಗ್ಗೆ ಗೊಂದಲಗಳಿವೆ. ಈ ಬಗ್ಗೆ ಪ್ರತಿಯೊಬ್ಬರೂ ಯಾವ ರೀತಿ ಎಚ್ಚರಿಕೆ ವಹಿಸಬೇಕು?               

ಡಾ|| ಫೌಚಿ: ಹಲವಾರು ಹಂತಗಳಲ್ಲಿ ಈ ಸೋಂಕು ಹರಡುವ ಅಪಾಯವಿದೆ. ಆದರೆ, ಸಾಮಾನ್ಯವಾಗಿ ಇದು ಹರಡುವ ಬಗೆಯನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಸೋಂಕು ಇರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಅದರಿಂದ ಹೊರಬರುವ ವೈರಸ್ ತುಂಬಿರುವ ಹನಿಗಳು ಇತರರಿಗೆ ಸುಲಭವಾಗಿ ಸೋಂಕನ್ನು ಹರಡುತ್ತವೆ. ಇವು ಸಾಮಾನ್ಯವಾಗಿ ಕೆಲವೇ ಕ್ಷಣಗಳಲ್ಲಿ ಕೆಳಗೆ ಬೀಳುತ್ತವೆ. ಇದರ ಜೊತೆಗೆ, ತಕ್ಷಣ ಕೆಳಗೆ ಬೀಳದೆ ಗಾಳಿಯಲ್ಲೇ ಸ್ವಲ್ಪ ಹೊತ್ತು ಇರುವ ಏರೋಸಾಲ್ ಗಳು ಸಹ ವೈರಸ್ ನ್ನು ಇನ್ನೊಬ್ಬರಿಗೆ ಹರಡುತ್ತವೆ. ಸೋಂಕಿತರು ಇದ್ದು ಹೋದ ನಂತರ ಕೊಠಡಿಗೆ ಬರುವ ನೀವು, ರೂಮಿನಲ್ಲಿ ಯಾರು ಇಲ್ಲ ಹಾಗಾಗಿ ನಾನು ಇಲ್ಲಿ ಸುರಕ್ಷಿತ ಎಂದುಕೊಂಡರೂ, ಅಲ್ಲಿರುವ ಏರೋಸಾಲ್ ಗಳನ್ನು ಉಸಿರಿನ ಮೂಲಕ ಸೇವಿಸಿದಾಗ ಸೋಂಕಿತರಾಗಬಹುದು. ಜೊತೆಗೆ, ಸೋಂಕು ಸುಲಭವಾಗಿ ಹರಡುವ ಇನ್ನೊಂದು ಮುಖ್ಯ ವಿಧಾನ ಹಸ್ತಲಾಘವ. ಯಾವುದೇ ವ್ಯಕ್ತಿ ಸಾಮಾನ್ಯವಾಗಿ ಕೆಮ್ಮುವಾಗ ಅರಿವಿಲ್ಲದೆ ತಮ್ಮ ಕೈಗಳನ್ನು ಮುಖಕ್ಕೆ ಹಿಡಿಯುತ್ತಾರೆ. ತದನಂತರ, ಇತರರಿಗೆ ಹಸ್ತಲಾಘವ ನೀಡಿದಾಗ ಅಥವಾ ಅವರು ಮುಟ್ಟಿದ ಜಾಗದಲ್ಲಿ ನಾವು ಮುಟ್ಟಿದಾಗ (ಉದಾಹರಣೆಗೆ ಸೋಂಕಿತರು ತೆಗೆದ ಬಾಗಿಲನ್ನು ನಾವು ಸಹ ಅದೇ ಜಾಗವನ್ನು ಹಿಡಿದು ತೆಗೆದಾಗ) ವೈರಸ್ ನಮ್ಮ ದೇಹ ಸೇರುತ್ತದೆ. ಯಾಕೆಂದರೆ, ವೈರಸ್ಗಳು ಸ್ಟೀಲ್ ಮತ್ತು ಪ್ಲಾಸ್ಟಿಕ್ ಗಳಂತಹ ನಿರ್ಜೀವ ವಸ್ತುಗಳ ಮೇಲೆ ಹಲವಾರು ಗಂಟೆಗಳ ಕಾಲ ಬದುಕಬಲ್ಲದು. ಹಾಗಂತ ನಾವು ಎಲ್ಲ ವಸ್ತುಗಳನ್ನ ಒರೆಸುತ್ತಾ ಕೂರುವ ಬ್ರಾಂತಿಗೆ ಒಳಗಾಗಬೇಕಾಗಿಲ್ಲ. ಆಗಾಗ್ಗೆ ಕೈ ತೊಳೆಯುವ ಮೂಲಕ ಅಲ್ಲಲ್ಲಿ ಮುಟ್ಟಿದ ನಂತರ ಅಂಟಿಕೊಳ್ಳುವ ವೈರಸ್ ನ್ನು ಸ್ವಚ್ಛಗೊಳಿಸಬಹುದು. ಹಾಗೆಯೇ, ಇತರರ ಕೈ ಕುಲುಕುವ ಅಭ್ಯಾಸವನ್ನು ಬಿಡಬೇಕು. ಆನ್ಲೈನ್ ನಲ್ಲಿ ಖರೀದಿಸಿದ ವಸ್ತುಗಳನ್ನು ತೊಳೆಯುವ ಅವಶ್ಯಕತೆಯಿಲ್ಲ, ಏಕೆಂದರೆ ಈ ತರಹದ ವಸ್ತುಗಳ ಮೇಲ್ಮೈಗಳಲ್ಲಿ ವೈರಸ್ ಬಹಳ ಕಾಲ ಬದುಕುವುದಿಲ್ಲ. 

ಸಂದರ್ಶಕ: ನೀವು ಪ್ರಾರಂಭದಲ್ಲಿ ಈ ಸೋಂಕಿನ ಮರಣ ಪ್ರಮಾಣದ ಬಗ್ಗೆ ಹೇಳಿದಿರಿ. ಈ ಸೋಂಕಿನಿಂದ ದೀರ್ಘಕಾಲೀನ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ವಯೋವೃದ್ಧರು ಹೆಚ್ಚು ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದಿದೆ. ಆದರೆ, ಇದರಿಂದ ಜನರು ಕರೋನ ಸೋಂಕು ಯುವಕರಿಗೆ ಬಾಧಿಸುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ. ಇದರ ಬಗ್ಗೆ ವಿವರಿಸಿ. 

ಡಾ|| ಫೌಚಿ: ಜನರು ಎರಡು ವಿಷಯವನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಒಂದು. ನೀವು ಯುವಕರಾದ ಮಾತ್ರಕ್ಕೆ ಕರೋನ ಸೋಂಕು ನಿಮಗೆ ಬರಲಾರದು ಎಂಬುದು ಸುಳ್ಳು. ಈಗಾಗಲೇ ಉಸಿರಾಟ ಸಮಸ್ಯೆ ಹಾಗು ವಿವಿಧ ದೀರ್ಘಕಾಲೀನ ರೋಗಗಳಿಂದ ನರಳುತ್ತಿರುವ ವಯೋವೃದ್ಧರು ಕರೋನದಿಂದ ಬಳಲುತ್ತಿರುವುದು ಸತ್ಯವಾದರೂ, ೩೦ ರಿಂದ ೪೦ ವರ್ಷಗಳ ಯುವಕರೂ ಸಹ ಸೋಂಕಿತರಾಗುತ್ತಿರುವುದಲ್ಲದೆ, ತೀವ್ರ ನಿಗಾ ಘಟಕಗಳಲ್ಲೂ ದಾಖಲಾಗುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಪ್ರಮಾಣ ವಯೋವೃದ್ಧರು ಅನ್ನುವುದು ಸತ್ಯವಾದರೂ ಯುವಕರು ಸಹ ಈ ಸೋಂಕನ್ನು ಹೊಂದಬಹುದು.    ಎರಡನೇ ವಿಷಯ. ಗಂಭೀರವಾಗಿ ಈ ಸೋಂಕು ನಿಮಗೆ ಬಾಧಿಸದಿದ್ದರೂ, ಕೆಲವೇ ಸೌಮ್ಯ ಗುಣಲಕ್ಷಣಗಳು ಅಥವಾ ಯಾವುದೇ ಗುಣಲಕ್ಷಣಗಳಿಲ್ಲದ್ದರೂ ನೀವು ಇನ್ನೊಬ್ಬರಿಗೆ ಸೋಂಕನ್ನು ಹರಡಬಲ್ಲರಿ. ನಿಮ್ಮಿಂದ ಸೋಂಕಿತರಾದವರೂ ಮುಂದೆ ಯಾವುದಾದರೂ ದುರ್ಬಲ ವಯೋವೃದ್ಧರಿಗೆ ಸೋಂಕನ್ನು ಹರಡಿ ಅವರ ಸಾವಿಗೆ ಕಾರಣರಾಗಬಹುದು. ಉದಾಹರಣೆಗೆ ನಾನೊಬ್ಬ ಯುವಕ. ನಾನು ಆರೋಗ್ಯವಾಗಿದ್ದೇನೆ ಎಂದು ಮನೆಗೆ ತೆರಳಿ ನನ್ನ ಮನೆಯಲ್ಲಿರುವ ಅಜ್ಜ-ಅಜ್ಜಿ ಅಥವಾ ರೋಗಗ್ರಸ್ತ ಸಂಬಂಧಿಕರಿಗೆ ಸೋಂಕು ಹರಡಿಸುವುದು ಸರಿಯೇ? ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಜೊತೆಯಲ್ಲಿ, ನಮ್ಮ ಸಂಸಾರವನ್ನು ಹಾಗೂ ಆ ಮೂಲಕ ಸಮಾಜವನ್ನು ರಕ್ಷಿಸುವ ಜವಾಬ್ದಾರಿ ಕೂಡಾ ನಮ್ಮದಾಗಿರುತ್ತದೆ. 

ಸಂದರ್ಶಕ: ಸಾಮಾಜಿಕ ಜಾಲತಾಣಗಳಲ್ಲಿ ಕರೋನಾ ಸೋಂಕಿಗೆ ಬಳಸಬಹುದಾದ ಹಲವಾರು ಔಷಧಗಳ ಬಗ್ಗೆ ಚರ್ಚೆಯಾಗುತ್ತಿದೆ. ಮಲೇರಿಯಾ ಔಷಧಗಳಿರಬಹುದು ಅಥವಾ ಕ್ಲೋರೊಕ್ವಿನ್ ಇರಬಹುದು. ನೀವು ಸ್ವಯಂ ಔಷಧೋಪಚಾರ ಮಾಡಿಕೊಳ್ಳುವ ಜನಸಾಮಾನ್ಯರಿಗೆ ಯಾವ ರೀತಿ ಎಚ್ಚರಿಕೆ ನೀಡಲು ಬಯಸುತ್ತೀರಾ? ಅಥವಾ ಈಗಾಗಲೇ ಯಾವುದಾದರೂ ಔಷಧಗಳನ್ನು ಕರೋನಾ ಗೆ ಕಂಡುಹಿಡಿದಿದ್ದಾರಾ? ಈ ವಿಷಯದ ತಜ್ಞರಾಗಿ ಏನು ಹೇಳಬಯಸುತ್ತೀರಾ?

ಡಾ|| ಫೌಚಿ: ಇದುವರೆಗೆ ಕರೋನಾಗೆ ಯಾವುದೇ ಸುರಕ್ಷಿತ ಮತ್ತು ಪರಿಣಾಮಕಾರಿಯಾದ ನೇರ ಚಿಕಿತ್ಸೆಗಳನ್ನು ಕಂಡುಹಿಡಿದಿಯಲಾಗಿಲ್ಲ. ಆದರೆ, ಯಾವ ಔಷಧವನ್ನ ಬಳಸಬಹುದು; ಯಾವುದನ್ನು ಬಳಸಲು ಸಾಧ್ಯವಿಲ್ಲ; ಯಾವುದು ಸುರಕ್ಷಿತ ಎಂಬ ಕುರಿತು ಹಾಗೂ ಈಗಾಗಲೇ ಇತರ ಸೋಂಕುಗಳಿಗೆ ಅನುಮೋದಿತ ಔಷಧಗಳನ್ನು ಬಳಸಲು ಇರುವ ಸಾಧ್ಯತೆಗಳ ಬಗ್ಗೆ ಹಲವಾರು ವೈದ್ಯಕೀಯ ಪ್ರಯೋಗಗಳು ನಡೆಯುತ್ತಿರುವುದು ಹೌದಾದರೂ, ಇವುಗಳಲ್ಲಿ ಯಾವುದನ್ನೂ ಬಳಸಬೇಕು ಎಂಬುದು ಇನ್ನೂ ಸಾಭೀತಾಗಿಲ್ಲ. ಅತ್ಯಂತ ಕುತೂಹಲಕಾರಿಗಳಾದ ಜನರು ಪ್ರಯೋಗಗಳಿಂದ ಸಾಭೀತಾಗದ ಔಷಧಗಳನ್ನು ಬಳಸುವ ಬಗ್ಗೆ ಚರ್ಚಿಸುತ್ತಿದ್ದಾರೆ. ಆದರೆ, ಈಗಾಗಲೇ ಅನುಮೋದನೆಯಾಗಿರುವ ಔಷಧಗಳನ್ನು ಸುರಕ್ಷಿತವೆಂದು ಪರಿಗಣಿಸಿದ್ದರೂ, ಅವುಗಳಲ್ಲೂ ವಿಷಕಾರಿ ಅಂಶಗಳಿವೆ. ಹಾಗಾಗಿ, ಈ ತರಹದ ಔಷಧಗಳ ವೈದ್ಯಕೀಯ ಪ್ರಯೋಗಗಳನ್ನು ಶೀಘ್ರವಾಗಿ ಕೈಗೊಂಡು ಜನರಿಗೆ ತಲುಪಿಸುವ ಕಾರ್ಯವನ್ನು ನಡೆಸುತ್ತಿದ್ದೇವೆ. ಯಾರೂ ಸಹ  ಸ್ವಯಂ ಔಷಧೋಪಚಾರ ಮಾಡಿಕೊಳ್ಳದೆ ವೈದ್ಯರ ಸಲಹೆ ಪಡೆಯುವುದು ಅತ್ಯವಶ್ಯಕ.  

ಸಂದರ್ಶಕ: ಒಂದು ಸಮಯಾವಧಿ ಬಗ್ಗೆ ನಾವು ಕೇಳುತ್ತಿದ್ದೇವೆ. ಬೇರೆ ದೇಶದಿಂದ ಬಂದವರು ೧೪ ದಿನಗಳವರೆಗೆ ಕಾಯ್ಬೇಕು ಅಂತಾರೆ. ಈ ೧೪ ದಿನ ನಾವು ಯಾಕೆ ಬಂಧಿಯಾಗಿರಬೇಕು. ಯಾಕೆ ಈ ಸಮಯ? ಇಷ್ಟು ಸಮಯ ಜನ ಪರಸ್ಪರರಿಂದ ದೂರ ಇದ್ದರೇ ಕರೋನಾ ವೈರಸ್ ಹೋಗಿಬಿಡೊತ್ತೆಯೇ?

ಡಾ|| ಫೌಚಿ: ಈ ಸಮಯ ಅನ್ನೋದು ವೈರಸ್ ನಮ್ಮೊಳಗಿರುವ ಸಮಯ. ಸಾಮಾನ್ಯವಾಗಿ ವೈರಸ್ ನ ಸೈಕಲ್ ನ್ನ ವಾರಗಳಲ್ಲಿ ಅಳೆಯುತ್ತೇವೆ. ಹೆಚ್ಚಿನ ಜನ ಈ ಎರಡು ವಾರಗಳ ಸಮಯದಲ್ಲಿ ಎಲ್ಲಾ ಸರಿ ಹೋಗುತ್ತದೆ ಎಂದು ಕೊಂಡಿದ್ದಾರೆ. ಆದರೆ, ಅದು ಆ ಪ್ರದೇಶದಲ್ಲಿ ವೈರಸ್ ಹರಡಿರುವ ಹಂತದ ಮೇಲೆ ಅವಲಂಬಿತವಾಗಿದೆ. ನ್ಯೂಯಾರ್ಕ್ ನಗರದ ಉದಾಹರಣೆ ತೆಗೆದುಕೊಳ್ಳುವುದಾದರೆ, ಇಲ್ಲಿ ವೈರಸ್ ಹೆಚ್ಚು ತಾಂಡವವಾಡುತ್ತಿದೆ . ಹಾಗಾಗಿ, ಎರಡು ವಾರಗಳಲ್ಲಿ ಇಲ್ಲಿ ಸೋಂಕು ಕಡಿಮೆಯಾಗುತ್ತದೆ ಎನ್ನಲು ಸಾಧ್ಯವಿಲ್ಲ. ಇಲ್ಲಿ ಪ್ರಸ್ತುತ ಸೋಂಕಿನ ಪ್ರಮಾಣ ಏರುತ್ತಲೇ ಇದೆ. ಅದು ಕಡಿಮೆಯಾಗುವ ಹಂತ ಬಂದಾಗ ವೈರಸ್ ನ ಸೈಕಲ್ ನಮಗೆ ಅರಿವಾಗುತ್ತದೆ. ಚೀನಾ ಮತ್ತು ಕೊರಿಯಾ ದೇಶಗಳ ಅನುಭವವನ್ನ ನೋಡುವುದಾದರೆ ಅಲ್ಲಿ ವೈರಸ್ ನ ಆರ್ಭಟ ಕಡಿಮೆಯಾಗಲು ೮ ವಾರಗಳೇ ಬೇಕಾದವು. ಆದರೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಈ ಸಮಯ ಬದಲಾಗೋತ್ತೇ.

ಸಂದರ್ಶಕ: ಈ ಸೋಂಕಿನಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆಯೇ? ಅಥವಾ ಒಮ್ಮೆ ಗುಣಮುಖರಾದವರು ಸೋಂಕಿಗೆ ಪ್ರತಿರೋಧಕ ಶಕ್ತಿ ಹೊಂದುತ್ತಾರೆಯೇ? 

ಡಾ।। ಫೌಚಿ: ಈ ಕುರಿತು ಯಾವುದೇ ಸಂಶೋಧನೆ ಇನ್ನೂ ನಡೆದಿಲ್ಲವಾದುದರಿಂದ, ಈ ಪ್ರೆಶ್ನೆಗೆ ಶೇಕಡಾ ೧೦೦ ರಷ್ಟು ಸರಿಯಾಗಿ ಯಾರೂ ಉತ್ತರಿಸಲು ಸಾಧ್ಯವಿಲ್ಲ. ಆದರೆ, ಇತರ ವೈರಸ್ ಗಳಂತೆ ಕರೋನಾದಲ್ಲೂ ಸಹ ಒಮ್ಮೆ ಸೋಂಕಿತರಾಗಿ ಗುಣಮುಖರಾದವರು ರೋಗ ನಿರೋಧಕ ಶಕ್ತಿ ಹೊಂದುತ್ತಾರೆ ಹಾಗೂ ಮರು ಸೋಂಕಿತರಾಗುವುದಿಲ್ಲ ಎಂಬ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ.         

ಕರೋನ ಸೋಂಕಿನ ಆರ್ಭಟ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಾವು ಗೊಂದಲಗಳಿಗೆ ಕಿವಿಗೊಡದೆ, ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. 'ಮನೆಯಲ್ಲಿರಿ-ಸುರಕ್ಷಿತವಾಗಿರಿ' ಎಂಬುದನ್ನ ಪರಿಪಾಲಿಸಿ, ನಮ್ಮ ಜೊತೆಗೆ ಇಡೀ ಕುಟುಂಬ ಹಾಗೂ ದೇಶವನ್ನು ರಕ್ಷಿಸೋಣ. ಜವಾಬ್ದಾರಿಯುತ ಪ್ರಜೆಗಳಾಗೋಣ, ಸೋಂಕನ್ನು ಹೊಡೆದೋಡಿಸೋಣ.

- ರೋಹಿತ್ ಕುಮಾರ್ ಹೆಚ್.ಜಿ.

#Corona #ಕರೋನಾ #ಜವಾಬ್ದಾರಿ #CoViD19 #Life #India #Fight_Against_Corona

Tuesday, March 31, 2020

ಯಾಕೆ ಲಾಕ್ ಡೌನ್ ಅನ್ನುವವರಿಗೆ ಇಲ್ಲಿದೆ ಉತ್ತರ


ಕರೋನಾ ಎದುರಾಗಿರುವ ಈ ಸಂದರ್ಭದಲ್ಲಿ ನಮ್ಮಲ್ಲಿ 4 ಗುಂಪಿನ ಜನರಿದ್ದಾರೆ. ಎ, ಬಿ, ಸಿ ಮತ್ತು ಡಿ ಅಂದುಕೊಳ್ಳೋಣ. 

'ಎ' ಗುಂಪು:
 
'ಎ' ಗುಂಪಿನ ಜನರು ಸೋಂಕನ್ನು ಹೊಂದಿರುವವರು. ಸೋಂಕಿನ ಗುಣಲಕ್ಷಣಗಳಿಂದ ಇವರನ್ನು ಪತ್ತೆ ಹಚ್ಚುವುದು ಸುಲಭ. ಈ ಗುಂಪಿನ ಹೆಚ್ಚು ಜನರು ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ. 

'ಸಿ' ಗುಂಪು:

'ಎ' ಗುಂಪಿನ ಜನರು, ತಮ್ಮ ಅರಿವಿದ್ದು ಭೇಟಿ ಮಾಡುವ ವ್ಯಕ್ತಿಗಳಾದ ಸ್ನೇಹಿತರು, ಬಂಧುಗಳು, ಸಹವರ್ತಿಗಳು ಹಾಗೂ ಬ್ಯಾಂಕ್, ಆಸ್ಪತ್ರೆ, ಹೋಟೆಲ್ ಮತ್ತು ಇತರೆಡೆ ಭೇಟಿಯಾಗುವವರು 'ಸಿ' ಗುಂಪಿಗೆ ಸೇರಿರುವವರು. ಈ ಗುಂಪಿನ ಜನರು ಸೋಂಕಿತರಿಗೆ ತಿಳಿದವರೇ ಆಗಿರುವುದರಿಂದ, ಎಷ್ಟೇ ಜನರಿದ್ದರೂ ಇವರನ್ನು ಕಂಡುಹಿಡಿಯುವುದು ಸುಲಭ ಹಾಗೂ ಸೋಂಕಿನ ನಿರ್ವಹಣೆ ಸಹ ಸಾಧ್ಯ.    

'ಬಿ' ಗುಂಪು: 

'ಎ' ಗುಂಪಿನ ಜನರು ತಮ್ಮವರಾದ 'ಸಿ' ಗುಂಪಿನ ಜನರನ್ನು ಭೇಟಿಯಾಗುವ ಸಂದರ್ಭಗಳಲ್ಲಿ ಅರಿಯದೆ ಸಂಪರ್ಕಕ್ಕೆ ಬರುವ ಜನರು ಇವರು. ಅಂದರೆ, ಬಸ್ಸು ಮತ್ತು ರೈಲು ನಿಲ್ದಾಣಗಳಲ್ಲಿ, ವ್ಯಾಪಾರ ಮಳಿಗೆ, ಹೋಟೆಲ್ ಮತ್ತು ಇತರೆಡೆ ಅಕ್ಕ ಪಕ್ಕ ಸಾಗುವಾಗ ಸೋಂಕಿತರಾಗುವ ಅಪರಿಚಿತರು. ಈ ಗುಂಪಿನ ಜನರಿಗೆ ತಾವು  ಸೋಂಕಿತರಾಗಿರುವುದು ಖುದ್ದು ಅವರಿಗೆ ತಿಳಿಯದಿರುವುದರಿಂದ, ಈ ಗುಂಪಿನ ಜನರನ್ನು ಪತ್ತೆ ಹಚ್ಚುವುದು ಕಷ್ಟ. ಈ ಗುಂಪಿನ ಜನರಿಂದಲೇ ಸೋಂಕು  ಹೆಚ್ಚು ವ್ಯಾಪಕವಾಗಿ ಹರಡುವುದು. 

'ಡಿ' ಗುಂಪು: 

ಎಲ್ಲೂ ಹೊರಗಡೆ ಹೋಗದೆ ಮನೆಯಲ್ಲಿಯೇ ಉಳಿಯುವ ಜನರ ಗುಂಪು ಇದು. ಆದರೆ, ಈ ಗುಂಪಿನ ಜನರು ಹೊರ ಹೋಗಿ 'ಬಿ' ಗುಂಪಿನ ಸಂಪರ್ಕಕ್ಕೆ ಬಂದಾಗ 'ಡಿ' ಗುಂಪು ಸಹ ಹೊಸ 'ಬಿ' ('ಬಿ2') ಗುಂಪು ಆಗಿ ಪರಿವರ್ತಿತಗೊಳ್ಳುತ್ತದೆ ಹಾಗೂ ಸಮಸ್ಯೆಯನ್ನು ಹೆಚ್ಚಿಸುತ್ತದೆ.   

ಈಗ ಎರಡು ವಾರಗಳ ಲಾಕ್ ಡೌನ್ ಯಾಕೆ ಅಂದರೆ, ಸೋಂಕು ತನ್ನ ಗುಣಲಕ್ಷಣಗಳನ್ನು ತೋರಿಸಲು ತೆಗೆದುಕೊಳ್ಳುವ ಸಮಯ (ಸೋಂಕಿನ ಇನ್ಕ್ಯುಬೇಷನ್ ಸಮಯ ಎನ್ನುತ್ತಾರೆ) 2 ವಾರ. ಈ 2 ವಾರಗಳ ಲಾಕ್ ಡೌನ್ ಸಮಯದಲ್ಲಿ ನಮಗೆ ಅರಿಯದೆ ಇರುವ 'ಬಿ' ಗುಂಪಿನಲ್ಲಿರುವ ಸೋಂಕಿತರಲ್ಲಿ ರೋಗದ ಗುಣಲಕ್ಷಣಗಳು ಕಂಡುಬಂದು ಅವರನ್ನು ಗುರುತು ಹಿಡಿದು, ಚಿಕಿತ್ಸೆಗೆ ಒಳಪಡಿಸಬಹುದು.  ಅಲ್ಲದೆ, ಬಿ2 ಗುಂಪಿಗೆ ಹೆಚ್ಚು ಜನರು ಸೇರದಂತೆ ತಡೆಯಬಹುದು. ಆ ಮೂಲಕ ದೇಶದಲ್ಲಿ ಸೋಂಕನ್ನು ಶೀಘ್ರವಾಗಿ ತಹಬದಿಗೆ ತರಬಹುದು. ಹಾಗಾಗಿ, ಈ ಸಮಯಗಳಲ್ಲಿ ಸಲಹೆಯನ್ನು ಕಡೆಗಣಿಸಿ, ಅನವಶ್ಯಕ ಪ್ರಯಾಣಗಳನ್ನು ಮಾಡುವುದು ಬರಿ ನಮಗಲ್ಲದೆ ಇಡೀ ದೇಶಕ್ಕೆ ಅಪಾಯಕಾರಿ. 

(ಸಂದೇಶವೊಂದರ ಭಾವಾನುವಾದ)

ನನ್ನ ಮಾತು:         

ಹಲವು ಸಂದರ್ಭಗಳಲ್ಲಿ ವ್ಯಕ್ತಿಯ ಸ್ವಹಿತಾಸಕ್ತಿ ಹಾಗೂ ದೇಶದ ಹಿತ ಯಾವಾಗಲೂ ವಿರುದ್ಧ ದಿಕ್ಕಿನಲ್ಲಿ ಚಲಿಸುವಂತದ್ದಾಗಿರುತ್ತದೆ. ಅಂದರೆ, ವ್ಯಕ್ತಿ ತನ್ನ ಹಿತಕ್ಕಾಗಿ ಮಾಡುವ ಕಾರ್ಯಗಳು ದೇಶಕ್ಕೆ ಮಾರಕವಾಗಿರೊತ್ತೆ. ಕೆಲವೊಮ್ಮೆ ಮಾತ್ರ ತನ್ನ ಹಿತ ದೇಶದ ಹಿತವಾಗುವ ಸಂದರ್ಭವೊದಗಿ ಬರುತ್ತದೆ. ಅಂತ ಒಂದು ಸಂದರ್ಭ ಈಗ ನಮ್ಮೆದುರಿದೆ. 

ಮಾರಕ ಕರೋನಾದ ವಿರುದ್ಧ ಸಾರಿರುವ ಸಮರದಲ್ಲಿ ದೇಶವನ್ನ ಗೆಲ್ಲಿಸೋಕೆ ನಾವು ಮಾಡಬೇಕಾಗಿರೋದು ನಮಗೆ ಸೋಂಕು ಬರದಂತೆ ನೋಡಿಕೊಳ್ಳುವುದು. ನಾವು ಪ್ರತಿಯೊಬ್ಬರೂ ಸೋಂಕಿನಿಂದ ಪಾರಾಗುವ ಪಣ ತೊಟ್ಟಲ್ಲಿ, ದೇಶ ಈ ಯುದ್ಧವನ್ನ ಗೆಲ್ಲುತ್ತೆ. ಈ ಸಮಯದಲ್ಲಿ ನಾವು ತೋರಿಸೋ ನಿರ್ಲಕ್ಷ್ಯತನ ನಮ್ಮವರ ಪ್ರಾಣಕ್ಕೆ ಕುತ್ತಾಗಲಿದೆ. ಸೋಂಕಿನ ಸರಪಳಿಯಲ್ಲಿ ನಾವೂ ಒಂದು ಕೊಂಡಿಯಾಗುವುದನ್ನು ತಪ್ಪಿಸಿದರೆ ಇಡೀ ಸೋಂಕಿನ ಸಂಕೋಲೆಯೇ ಕೊನೆಯಾಗಿಸಬಹುದು. ಆ ನಿಟ್ಟಿನಲ್ಲಿ ಜನತಾ ಕರ್ಫ್ಯೂ ಒಂದು ಸರಿದಾರಿ, ಪಾಲಿಸೋಣ ನಾವೆಲ್ಲಾ ಸೇರಿ.  

ಜವಾಬ್ದಾರಿಯುತ ಪ್ರಜೆಗಳಾಗೋಣ, ಸೋಂಕನ್ನು ಹೊಡೆದೋಡಿಸೋಣ.   

- ರೋಹಿತ್ ಕುಮಾರ್ ಹೆಚ್ ಜಿ 



#Corona #ಕರೋನಾ #ಜನತಾ_ಕರ್ಫ್ಯೂ #ಜವಾಬ್ದಾರಿ #CoViD19

Thursday, July 5, 2018

ಹೀಗೊಂದು ನಲ್ಲೆಯ ಕಾಲ್ಪನಿಕ ಪತ್ರ

ಕಾಣದೂರಿಗೆ ಹೋಗಿರುವ ನನ್ನ ಪ್ರೀತಿಯೇ,

ನಿನ್ನ ಮೇಲೆ ನಂಗೆ ಕೋಪವಿದೆ. ನಿನ್ನ ಬಾಹು-ಬಂಧನದಲ್ಲಿದ್ದು ಹೇಳಬೇಕೆಂದಿದ್ದ ವಿಷಯಗಳನ್ನು ಪತ್ರದಲ್ಲಿ ಹೇಳುವಂತೆ ಮಾಡಿದಕ್ಕೆ.

ಕಾಲೇಜಿನಲ್ಲಿ ನೋಡಿದ ಮೊದಲ ದಿನವೇ ನನ್ನಲ್ಲಿ ನೀನು ಭಯ ಹುಟ್ಟಿಸಿದ್ದೆ. ನೀನು ಬರುತ್ತಿರುವ ದಾರಿಯಲ್ಲಿ ಬರಲು ಸಹ ನಡುಗುವಷ್ಟು ಅಂಜಿಕೆ. ನಿನ್ನಾ ದಿಟ್ಟ ಕಣ್ಣುಗಳು ಎಂತವರನ್ನೂ ದಿಗಿಲುಗೊಳಿಸುತ್ತಿತ್ತು. ಇನ್ನು ನಾನ್ಯಾವ ಲೆಕ್ಕ? ನಿನ್ನಾ ಕಣ್ಣು ನನ್ನ ಕಣ್ಗಳೊಡನೆ ಮೊದಲ ಸಲ ಬೆರೆತಾಗ ನನ್ನ ಉಸಿರು ಒಮ್ಮೆ ಮರೆತು ನಿಂತಿದ್ದು ಮಾತ್ರ ಸುಳ್ಳಲ್ಲ. ನಿನ್ನೊಡನೆ ಮಾತನಾಡಿದಾಗಲೇ ಅರಿವಾಗಿದ್ದು, ನಿನ್ನೊಳಗೊಬ್ಬ 'ಮುದ್ದು' ಅಡಗಿದ್ದಾನೆ  ಎಂದು. ಆ ಮುದ್ದುವಿಗೆ ಬಿದ್ದವಳು ನಾನು. ಆದರೂ ನಿನ್ನಲ್ಲಿ ಬಿನ್ನವಿಸಲು ಏನೋ ಭಯ. ನಿನ್ನ ಪಡೆಯೋ ಪ್ರಯತ್ನವೆಲ್ಲಿ ವಿಫಲವಾಗುವುದೋ ಎಂದು. ನಿನ್ನಲ್ಲೂ ನನ್ನೆಡಗಿನ ಪ್ರೀತಿ ಅಭಿವ್ಯಕ್ತಗೊಳ್ಳುತ್ತಿದ್ದರೂ, ಅದೇನೋ ಹೆಣ್ಣಿನಲ್ಲಿರುವ ಸಹಜ ಅಧೈರ್ಯ ನನ್ನಲಿ. ನಿನ್ನ ಮನಸ್ಸು ಭಾವ  ಭಾರ ತಾಳಲಾರದೆ ಪ್ರೀತಿ ಪ್ರಸ್ತಾಪವಿತ್ತಾಗಲೂ, ನಾಚಿಕೆಯ ಮೌನದೊಂದಿಗಿನ ನಗುವನ್ನೇ ಹೊತ್ತು ನಾನು ನಿಂತಿದ್ದೆ. ನಿಜವಾಗಲೂ, ಮನದ ಕಡಲು ಅಂದು ಬೆಳದಿಂಗಳು ಸಿಕ್ಕಷ್ಟು  ಭೋರ್ಗೆರೆಯುತಿತ್ತು. ಆದರೆ, ಆ ಪ್ರೀತಿಯ ಭೋರ್ಗೆರೆತ ನಿನ್ನ ತೋಯ್ದು ತಣಿಸುವಷ್ಟರಲ್ಲೇ, ನೀ ನನ್ನ ಕಣ್ಣೀರಲ್ಲಿ ನಿಲ್ಲಿಸಿ, ಕಣ್ಮರೆಯಾದೆ.

ಅಂದು ಜನ್ಮವಾದ ನನ್ನ ನೋವಿಗೆ ೫೦ ವರ್ಷ ಪ್ರಾಯವಾದಂತಹ ಭಾವ. ಕಣ್ಣೀರು-ಕೊನೆಯುಸಿರು ಎರಡು ಒಂಟಿ ಹಕ್ಕಿಗಳಂತೆ. ಒಂದು ಹಕ್ಕಿ ನನ್ನೊಳಗೆ ಹೊಕ್ಕಿ ಕುಳಿತಿದ್ದರೆ, ಇನ್ನೊಂದು ನಿನ್ನೊಂದಿಗೆ ಲೀನವಾಗಿತ್ತು. ನಿಂತ ನೆಲ ಕದಲಿ ಕುಸಿದು ಹೋಗಿತ್ತು. ಬರಿಯ ಕತ್ತಲೆಗೆ ಹೆದರುವ ನಾ, ಇಡೀ ಜೀವನ ನಿನ್ನ ಕಣ್ಗಳ ಬೆಳಕಿನಡಿಯಲ್ಲೇ ಬದುಕಬೇಕೆಂದಿದ್ದೆ. ಆದರೆ, ನೀನೇ ನೆರಳಿಗೆ ಸರಿದು ಬಿಟ್ಟೆ. ಎಂದೂ ನನ್ನ ಬಿಟ್ಟಿರೋಲ್ಲ ಎಂದವನು ಯಾಕೆ ಹೀಗೆ ಹೇಳದೇ ಹೊರಟು ಹೋದೆ? ಮುತ್ತು-ಮೋಹಗಳಾಚೆ ಬೆಳೆದಿದ್ದ ನಮ್ಮ ಅನನ್ಯ ಪ್ರೀತಿಗೆ ಜಗತ್ತಿನ ಕಣ್ಣು ಬಿದ್ದಿದ್ದರೆ ಅದಕ್ಕೊಂದು ಹಿಡಿ ಶಾಪ ನನ್ನದು ಯಾವತ್ತಿಗೂ ಇದೆ.

ಕಳೆದೆನಾ ನಿನ್ನಾ?
ಮುಳುಗಿ ಹೋದ ಬೆಳಕ ಹುಡುಕುತಾ
ಕತ್ತಲೆಯಲಿ ಕೈ ಚಾಚಿದೆನಾ?
ಕದಲಿ ಹೋದ ನಿಂತ ನೆಲದಿ
ನಡುಗದೆಯೇ ನಿಲ್ಲುವೆನಾ?
ಎನಿತು ಪ್ರೆಶ್ನೆಗಳ ಸೆರೆಯು?
ಎನಿತು ಮೌನ ಮನದ ಒಳಗೊಳಗೇ ಬರ ಸಿಡಿಲು?
ನೋವ ಹಾದಿಯಲಿ ನಗುವ ಹುಡುಕಾಟವೇತಕೆ ಈ ಪರಿಯು?

ನೀನಿರದ ಬದುಕಿನ ಕಲ್ಪನೆಯು ನನಗಿರಲಿಲ್ಲ. ನೀನೊಬ್ಬನಿರದ ಈಗ, ಜಗತ್ತಿನಲ್ಲಿ ಮತ್ಯಾರು ಇಲ್ಲದೆ ನನ್ನೊಂದಿಗೆ ನೀನೊಬ್ಬನೇ ಇರುವಂತೆ ಭಾವಿಸುತ್ತದೆ. ಇಲ್ಲ ಇಲ್ಲ. ನೀನಲ್ಲದೆ ನನ್ನೊಂದಿಗೆ ಇನ್ನೊಬ್ಬನಿರುತ್ತಾನೆ. ಅವನೇ ನನ್ನ ಕಣ್ಣೀರು. ನನಗಿಂತ ಹೆಚ್ಚು ನನ್ನ ಕಂಬನಿಯೇ ನಿನ್ನ ಇಷ್ಟಪಡುತ್ತೆ ಅನ್ನಿಸೊತ್ತೆ ಕಣೋ. ಏಕೆಂದರೆ, ನಿನ್ನ ನೆನೆದಾಗಲೆಲ್ಲಾ, ನಿನ್ನ ನೆನಪನ್ನ ನೋಡೋಕೆ ತಂತಾನೇ ಕಂಬನಿಯೂ ಸಹ ಜೊತೆ ಬರುತ್ತಾನೆ.

ಉದ್ದುದ್ದ ಗೀಚಿದರೆ ಮುಗಿಯದು
ಮುದ್ದು ಮನದ ಆಳದಿ ಹೊಕ್ಕಿ ಕೂತಾ ಕದನ,
ಎಷ್ಟು ಸಾಲುಗಳಾದರೇನು? ಕವನಗಳ ಹುಚ್ಚೆದ್ದರೇನು?
ವ್ಯಕ್ತವಾಗುವುದೇ? ವ್ಯಕ್ತವು ವ್ಯರ್ಥವಾಗುವುದೇ?
ತಲ್ಲಣಿಸಿದೆ ಮನ. 

ನೀ ನನ್ನಿಂದ ದೂರವಾಗೋ ಕೆಟ್ಟ ಕನಸು ಬಂದಾಗಲೆಲ್ಲಾ ಬೆವರಿ-ಬೆದರಿ ಎಚ್ಚರಗೊಳ್ಳುತ್ತೇನೆ. ಎದ್ದ ಮೇಲೆ ಕನಸಲ್ಲಾದರೂ ಒಂದು ಕ್ಷಣ ನೀನು ಬಂದು ಹೋದೆಯೆಂಬ ಸಮಾಧಾನ ಉಳಿದುಕೊಳ್ಳುತ್ತದೆ. ಪ್ರತಿ ಬಾರಿ ಬಿಕ್ಕಳಿಕೆ ಬಂದಾಗ ನೀನು ನೆನೆಸಿಕೊಳ್ಳುತ್ತಿದ್ದೀಯ ಅಂತ ಮನಸು ಹೇಳಿಕೊಳ್ಳೊತ್ತೆ. ಆಗ ನೀನಿದ್ದಾಗ ಒಂಟಿತನದ ಸುಳಿವಿರುತ್ತಿರಲಿಲ್ಲ. ಆದರೆ, ಈಗ ನನ್ನ ಒಂಟಿತನದ ಜೊತೆಗಾರ ನೀನೆ.

ಕಡಲು ತಿರುತಿರುಗಿ ತೀರದೆಡೆ ಬರುವಂತೆ ನನ್ನೆಲ್ಲಾ ಭಾವಗಳೂ ನಿನ್ನ ಕಡೆಗೇ ಧಾವಿಸುತ್ತವೆ. ನೀನೆಲ್ಲಿದ್ದರೂ ನನ್ನವನೇ. ನಿನ್ನೊಡನೆಯ ನನ್ನೀ ಜೀವನದಿಂದ ನಿನ್ನ ಬೇರ್ಪಡಿಸಲು ಯಾರಿಗೂ ಸಾಧ್ಯವಿಲ್ಲ. ನಿನ್ನೊಂದಿಗೆ ನಾನಿದ್ದ ಪ್ರತಿ ಕ್ಷಣಗಳನ್ನು ಜೀವನಾದ್ಯಂತ ಅನುಭವಿಸುವೆ. ಆದರೆ, ನಿನ್ನ ಮುಂದೆ ಕುಳಿತು, ನನ್ನ ಬೆರಳ ನಡುವೆ ನಿನ್ನ ಬೆರೆಳುಗಳ ಸೇರಿಸಿ, ಒಬ್ಬರನ್ನೊಬ್ಬರು ನೋಡುತ್ತಾ, ಮೌನದಲ್ಲೇ ಮಾತನಾಡುವ ಆಸೆಯೊಂದಿದೆ, ಎಂದು ಬರುವೆ ಹೇಳು?


ನಿನ್ನೇ ಕಾದು ಕುಳಿತಿರುವ ಮನಸು...       

Saturday, June 30, 2018

ನಿಪಾಹ್ ವೈರಾಣು - ಭಯ ಪಡುವ ಮುನ್ನ ಅರಿತುಕೊಳ್ಳೋಣ

ಕಗ್ಗತ್ತಲ ರಾತ್ರಿಗಳಲ್ಲಿ ನಿರ್ಜನ ಕಟ್ಟಡ ಹಾಗೂ ಗುಹೆ-ಬಾವಿಗಳಲ್ಲಿ ತನ್ನ ನಿಶಾಚರ ಬದುಕು ಕಳೆಯುವ ಬಾವುಲಿಗಳನ್ನು ಕಂಡರೆ ಆಶ್ಚರ್ಯ ಹಾಗೂ ಭಯ ಎರಡು ಒಟ್ಟೊಟ್ಟಿಗೆ ಮೂಡುವುದು ಅತ್ಯಂತ ಸಹಜ. ತನ್ನ ಮುಂಗೈಯನ್ನು ರೆಕ್ಕೆಯಾಗಿ ಮಾರ್ಪಡಿಸಿಕೊಂಡಿರುವ ಬಾವುಲಿಗಳು ಹೆಚ್ಚು ಅವಧಿಯ ಕಾಲ ಹಾರುತ್ತಲೇ ಕಳೆಯಬಹುದಾದ ಸಸ್ತನಿಗಳಾಗಿವೆ. ಹೆಚ್ಚಿನ ಜನರಲ್ಲಿ ಬಾವುಲಿಗಳು ಕುತೂಹಲ ಮೂಡಿಸಿದರೂ, ಅದರ ಕಾರ್ಯಾಚರಣೆ ನಮ್ಮ ನಿದ್ರೆಯ ಹೊತ್ತಿನಲ್ಲಿ ಪ್ರಾರಂಭವಾಗುವುದರಿಂದ, ಅವುಗಳನ್ನು ಅರಿಯಲು ಸಾಧ್ಯವಾಗುವುದಿಲ್ಲ. ಗ್ರಾಮ್ ನಷ್ಟು ಚಿಕ್ಕದರಿಂದ ಒಂದೂವರೆ ಕಿಲೋಗ್ರಾಮ್ ನಷ್ಟು ತೂಕದಷ್ಟು ದೊಡ್ಡ ಪ್ರಜಾತಿಯ ಬಾವುಲಿಗಳು ನಮ್ಮ ಸುತ್ತಮುತ್ತಲೂ ಇದ್ದು, ಇವುಗಳ ರೆಕ್ಕೆಗಳು ಅರ್ಧ ಅಡಿಯಿಂದ ಸಾಮಾನ್ಯ ಮನುಷ್ಯನ ಎತ್ತರವಾದ ಐದೂವರೆ ಅಡಿಯಷ್ಟು ದೊಡ್ಡದಿರುತ್ತವೆ. ಎಂಟಿರೋಕಿರೊಪ್ಟೆರಾ ಮತ್ತು ಯಂಗೋಕಿರೊಪ್ಟೆರಾ ಎಂಬ ಎರಡು ವಿಭಾಗಗಳಲ್ಲಿ ಸಿಗುವ ಬಾವುಲಿಗಳಲ್ಲಿ ಕೀಟ, ಹಣ್ಣು ಹಾಗೂ ಇತರ ಪ್ರಾಣಿಗಳನ್ನು ತಿಂದು ಬದುಕುವ ವಿವಿಧ ಪ್ರಬೇದಗಳಿವೆ. ಬಾವುಲಿಗಳು ಹೂವುಗಳ ಪರಾಗಸ್ಪರ್ಶದಲ್ಲಿ, ಕೀಟಗಳನ್ನು ನಾಶಪಡಿಸುವಲ್ಲಿ ಹಾಗೂ ತಮ್ಮ ಸಗಣಿಯಿಂದ ನೈಸರ್ಗಿಕ ಗೊಬ್ಬರದ ತಯಾರಿಕೆಯಲ್ಲಿ ಹೆಚ್ಚು ಉಪಯುಕ್ತವಾಗಿವೆ. ಇವೆಲ್ಲದರ ನಡುವೆ ಬಾವುಲಿಗಳು ಮಾನವನಿಗೆ ಅತ್ಯಂತ ಭಾಯಾನಕ ರೋಗಾಣುಗಳನ್ನು ಹರಡುವ ಮೂಲಕ ಹೆಚ್ಚಿನ ಅಪಾಯವನ್ನು ಸಹ ತಂದಿಡುತ್ತಿವೆ.

ಈಗ ಬಾವುಲಿಗಳ ಮೂಲಕ ಎದುರು ಬಂದು ನಮ್ಮನ್ನೆಲ್ಲಾ ತಲ್ಲಣಗೊಳಿಸಿರುವ ರೋಗಾಣುವೇ ನಿಪಾಹ್ ವೈರಸ್! ಹೌದು. ದಕ್ಷಿಣ ಭಾರತದ ಕೇರಳದಲ್ಲಿ ಇತ್ತೀಚೆಗೆ ಸ್ಫೋಟಗೊಂಡ ನಿಪಾಹ್ ಸೋಂಕು ಕನಿಷ್ಠ 11 ಜನರನ್ನು ಬಲಿ ತೆಗೆದುಕೊಂಡಿದೆ. ಸುಮಾರು 25ಕ್ಕೂ ಅಧಿಕ ಜನರು ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿ, ಭಾಗದಲ್ಲಿ ಹೆಚ್ಚಿನ ಆತಂಕ ಮನೆ ಮಾಡಿದೆ. ಹಾಗೆಂದು ಇದು ಪ್ರಥಮ ಬಾರಿಗೆ ಕಂಡುಬಂದಿರುವ ಸೋಂಕು ಖಂಡಿತಾ ಅಲ್ಲ! ೧೯೯೮ ರಲ್ಲಿ ಮಲೇಷಿಯಾದ ಕಂಪುಂಗ್ ಸುಂಗೈ ನಿಪಾಹ್ ಎಂಬ ಪ್ರದೇಶದಲ್ಲಿ ವೈರಾಣುವಿನ ಆರ್ಭಟ ಪ್ರಥಮವಾಗಿ ಕಾಣಿಸಿಕೊಂಡು, ಒಟ್ಟು ೨೮೩ ಸೋಂಕಿತರಲ್ಲಿ ೧೦೯ (ಶೇಕಡಾ ೩೯ ರಷ್ಟು) ಜನರು ಬಲಿಯಾಗಿದ್ದರು. ಅಂದು ಸೋಂಕಿಗೆ ಕಾರಣವಾದ ವೈರಾಣುವನ್ನು ಪ್ರದೇಶದ ಹೆಸರಿಟ್ಟುನಿಪಾಹ್ವೈರಾಣು ಎಂದು ಕರೆಯಲಾಯಿತು.

ವೈರಾಣುವು ಕಾಡಿನಲ್ಲಿ ಸಾಮಾನ್ಯವಾಗಿ ಟೆರೋಪಸ್ ಎಂಬ ಹಣ್ಣುಗಳನ್ನು ತಿನ್ನುವ ಗುಂಪಿನ ಬಾವುಲಿಗಳಲ್ಲಿ ಬೆಳೆದು ನೆಲೆಸಿರುತ್ತವೆ. ರೋಗಾಣು ಹೊಂದಿದ ಬಾವುಲಿಗಳ ಜೊಲ್ಲು ಮತ್ತು ಮೂತ್ರದಿಂದ ಕಲುಷಿತಗೊಂಡ ಹಣ್ಣುಗಳನ್ನು ಅಥವಾ ನೀರನ್ನು ಸೇವಿಸುವುದರಿಂದ ನಿಪಾಹ್ ವೈರಸ್ ಸುಲಭವಾಗಿ ನಮ್ಮ ಅಥವಾ ಯಾವುದೇ ಪ್ರಾಣಿಯ ದೇಹವನ್ನು ಸೇರಿಕೊಳ್ಳಬಹುದು. ಬಾವುಲಿಗಳಲ್ಲಿ ಯಾವುದೇ ರೀತಿಯ ಸೋಂಕನ್ನು ಉಂಟು ಮಾಡದ ವೈರಾಣುಗಳಿಂದ ಸೋಂಕಿತಗೊಂಡ ಇತರ ಪ್ರಾಣಿಗಳು ಹಾಗೂ ವ್ಯಕ್ತಿಗಳು ಸಹ ರೋಗಾಣುವನ್ನು ಹರಡಬಲ್ಲರು. ಮಲೇಷಿಯಾದಲ್ಲಾದ ನಿಪಾಹ್ ಸ್ಫೋಟಕ್ಕೆ ಸೋಂಕಿತ ಹಂದಿಗಳು ಪ್ರಮುಖ ಕಾರಣವಾಗಿತ್ತು.

ಟೆರೋಪಸ್ ಬಾವುಲಿಗಳು ಬಹುತೇಕ ಪಾಕಿಸ್ತಾನದಿಂದ ಭಾರತ, ಬಾಂಗ್ಲಾದೇಶ ಒಳಗೊಂಡಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದುದ್ದಕ್ಕೂ ಕಾಣಸಿಗುತ್ತವೆ. ಹಾಗಾಗಿ ನಿಪಾಹ್ ಸೋಂಕು ಪ್ರದೇಶಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. 2001 ರಿಂದ ಇಲ್ಲಿಯವರೆಗೆ ಪ್ರತಿ ವರ್ಷ ಬಾಂಗ್ಲಾದೇಶದಲ್ಲಿ ಹಾಗೂ ಆಗಾಗ ನಮ್ಮ ಭಾರತದಲ್ಲೂ ಸೋಂಕು ಕಾಡುತ್ತಲಿದೆ. ೨೦೦೧ ರಲ್ಲಿ ಭಾರತದ ಪಶ್ಚಿಮ ಬಂಗಾಳದ ಸಿಲಿಗುರಿ ಪಟ್ಟಣದಲ್ಲಿ ಕಂಡು ಬಂದ ನಿಪಾಹ್ ಸೋಂಕು ಒಟ್ಟು ೪೫ ಜನರನ್ನು ಬಳಿ ಪಡೆದಿತ್ತು. ಆದರೆ, ದಕ್ಷಿಣ ಭಾರತಕ್ಕೆ ವೈರಾಣು ಮೊದಲ ಬಾರಿಗೆ ದಾಳಿಯಿಟ್ಟಿದೆ.  

ವೈರಾಣು ದೇಹ ಸೇರಿದ ಕೆಲವೇ ದಿನಗಳಲ್ಲಿ ರೋಗಲಕ್ಷಣಗಳು ಗೋಚರವಾಗುತ್ತವೆ. ಮೆದುಳು ಮತ್ತು ಶ್ವಾಸಕೋಶಕ್ಕೆ ಪ್ರಮುಖವಾಗಿ ಹಾನಿಯನ್ನುಂಟು ಮಾಡುವ ನಿಪಾಹ್ ವೈರಾಣು, ಜ್ವರ, ತಲೆ ನೋವು, ಕೆಮ್ಮು, ಉಸಿರಾಟ ಸಮಸ್ಯೆ, ಅರೆ ಪ್ರಜ್ಞಾವಸ್ಥೆ, ದಿಗ್ಬ್ರಾಂತರಾಗುವುದು ಮತ್ತು ಮಾನಸಿಕ ಗೊಂದಲ ಸೇರಿದಂತೆ ರಕ್ತನಾಳಗಳ ಮತ್ತು ಮೆದುಳಿನ ಉರಿಯೂತಗಳಂತಹ ಅಪಾಯಕಾರಿ ಸಮಸ್ಯೆಗಳನ್ನುಂಟು ಮಾಡುತ್ತದೆ. ಶೀಘ್ರದಲ್ಲಿ ಚಿಕಿತ್ಸೆ ದೊರಕದಿದ್ದರೆ ಕೆಲವೇ ದಿನಗಳಲ್ಲಿ ರೋಗಿಯು ಕೋಮಾಗೆ ತಲುಪಿ, ಸಾವನ್ನಪ್ಪುತ್ತಾನೆ. ಶೇಕಡಾ 38 ರಿಂದ 92 ರಷ್ಟು ಮರಣ ಪ್ರಮಾಣವನ್ನು ಹೊಂದಿರುವ ನಿಪಾಹ್ ಸೋಂಕಿಗೊಳಗಾದ 100 ರಲ್ಲಿ 70ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿರುವುದು ನಿಜಕ್ಕೂ ಕಳವಳಕರವಾಗಿದೆ. ಅಲ್ಲದೇ, ಸೋಂಕಿನಿಂದ ಬದುಕುಳಿದವರಲ್ಲಿ ದೀರ್ಘಾವಧಿಯವರೆಗೆ ನರರೋಗಗಳು ಬಾಧಿಸುತ್ತವೆ. ಎಲ್ಲಾ ಕಾರಣಗಳಿಂದ ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆಯು ನಿಪಾಹ್ ವನ್ನು ಆಧ್ಯತೆಯ ರೋಗಾಣುಗಳ ಪಟ್ಟಿಯಲ್ಲಿ ಸೇರಿಸಿದೆ.

ಹಾಗಿದ್ದರೆ ಇದಕ್ಕೆ ಇರುವ ಪರಿಹಾರಗಳೇನು? ಕಳೆದ ಎರಡು ದಶಕಗಳಲ್ಲಿ ರೋಗದ ಬೆಳವಣಿಗೆ ಕುರಿತಾಗಿ ಹೆಚ್ಚು ಸಂಶೋಧನೆಗಳು ನಡೆದಿದ್ದರೂ, ಸೋಂಕನ್ನು ತಡೆಗಟ್ಟುವಲ್ಲಿ ಹಾಗೂ ನಿವಾರಿಸುವಲ್ಲಿ ಸೂಕ್ತ ಪ್ರಗತಿ ಕಾಣಲಾಗಿಲ್ಲ. ಹಾಗಾಗಿ ಸದ್ಯದ ಮಟ್ಟಿನಲ್ಲಿ ಯಾವುದೇ ರೀತಿಯ ಔಷಧಗಳು ಇದಕ್ಕೆ ಲಭ್ಯವಿಲ್ಲ. ಕೇವಲ ಗುಣಲಕ್ಷಣಗಳನ್ನು ನಿವಾರಿಸಿ, ತೀವ್ರ ರೀತಿಯ ಬೆಂಬಲ ವ್ಯವಸ್ಥೆ ನೀಡಿ ರೋಗಿಗೆ ಆರೈಕೆ ಮಾಡುವುದೊಂದೆ ಪ್ರಸ್ತುತ ಅನುಸರಿಸುತ್ತಿರುವ ಚಿಕಿತ್ಸಾ ವಿಧಾನವಾಗಿದೆ. ಹಲವು ವಿಜ್ಞಾನಿಗಳು ವಿವಿಧ ಪ್ರಾಣಿಗಳ ಮೇಲೆ ಅಧ್ಯಯನ ನಡೆಸಿ, ನಿಪಾಹ್ ಸೋಂಕಿನಿಂದ ಸಂಪೂರ್ಣ ಸುರಕ್ಷೆಯನ್ನು ನೀಡುವ ಹಲವಾರು ಲಸಿಕೆಗಳನ್ನು ಕಂಡುಹಿಡಿದಿದ್ದಾರೆ. ಆದರೆ, ಇವುಗಳನ್ನು ಮಾನವನಲ್ಲಿ ಪರೀಕ್ಷಿಸುವಂತಹ ಕಾರ್ಯಕ್ಕೆ ಯಾವುದೇ ಅದ್ಯಯನ ಸಂಸ್ಥೆ ಅಥವಾ ಔಷಧೀಯ ಕಂಪನಿಗಳು ಮುಂದಾಗಿಲ್ಲ. ಪ್ರತಿ ವರ್ಷ ಅತಿ ಕಡಿಮೆ ಜನರಲ್ಲಿ ಕಾಣಿಸಿಕೊಳ್ಳುವ ಸೋಂಕಿಗೆ ಸಿದ್ದಪಡಿಸುವ ಲಸಿಕೆಯು ಹೆಚ್ಚಿನ ಲಾಭ ತಂದುಕೊಡಲಾರದು ಎನ್ನುವುದೊಂದೆ ಇದರ ಹಿಂದಿರುವ ಪ್ರಮುಖ ಕಾರಣ. ಸಮಸ್ಯೆಗೆ ಪರಿಹಾರ ನೀಡಲು ಜನವರಿ 2017 ರಲ್ಲಿ ಕೊಯಲೇಶನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್ನೆಸ್ ಇನ್ನೋವೇಶನ್ (ಸಿ..ಪಿ..) ಎಂಬ ಸಾರ್ವಜನಿಕ-ಖಾಸಗಿ ಒಕ್ಕೂಟವೊಂದನ್ನು ರಚಿಸಲಾಗಿದೆ. ವಿವಿಧ ಸರ್ಕಾರ ಹಾಗೂ ಔಷಧೀಯ ಕಂಪನಿಗಳನ್ನು ಹೊಂದಿರುವ ಒಕ್ಕೂಟ ನಿಪಾಹ್ ದಂತಹ ಸಾಂಕ್ರಾಮಿಕ ಸಾಮರ್ಥ್ಯವುಳ್ಳ ರೋಗಗಳಿಗೆ ಸುರಕ್ಷಿತವಾದ ಹಾಗೂ ಕೈಗೆಟುಕುವಂತಹ ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಮುಂಬರುವ ವರ್ಷಗಳಲ್ಲಿ ಲಸಿಕೆಗಳು ಮಾರುಕಟ್ಟೆಗೆ ಬರುವ ಎಲ್ಲಾ ಲಕ್ಷಣಗಳು ಇವೆ. ಲಸಿಕೆಗಳ ಜೊತೆಯಲ್ಲೇ ವೈರಾಣುವನ್ನು ನಾಶಪಡಿಸುವಂತಹ ಔಷಧಗಳನ್ನು ಅಭಿವೃದ್ಧಿಪಡಿಸಲು ಸಹ ಪ್ರಯತ್ನಗಳು ನಡೆದಿವೆ. ಪ್ರಯತ್ನಗಳಲ್ಲಿ ನಾವು ಯಶಸ್ಸು ಕಾಣುವವರೆಗೆ ವೈರಾಣುವು ಬರದಂತೆ ತಡೆಗಟ್ಟುವುದೇ ನಮ್ಮ ಮುಂದಿರುವ ದಾರಿಯಾಗಿದೆ


ವೈರಾಣು ಬರದಂತೆ ಹಾಗೂ ಹರಡದಂತೆ ತಡೆಗಟ್ಟಲು ಇರುವ ಮೊದಲ ದಾರಿ ಜಾನುವಾರುಗಳಿಗೆ ವೈರಾಣು ಸೋಂಕದಂತೆ ನೋಡಿಕೊಳ್ಳುವುದು. ಇದಕ್ಕಾಗಿ ಬಾವುಲಿಗಳು ವಾಸಿಸುವಂತಹ ಮತ್ತು ಹಣ್ಣುಗಳಿರುವಂತಹ ಮರಗಳನ್ನು ಆದಷ್ಟು ಜಾನುವಾರುಗಳ ಸಾಕಾಣಿಕೆ ಕೇಂದ್ರದ ಬಳಿ ಇರದಂತೆ ನೋಡಿಕೊಳ್ಳಬೇಕು. ಇದು ಜಾನುವಾರುಗಳಿಂದ ಮಾನವನಿಗೆ ನಿಪಾಹ್ ವೈರಸ್ ಸೋಂಕು ಹರಡುತ್ತಿರುವ ಪ್ರದೇಶಗಳಲ್ಲಿ ಹೆಚ್ಚು ಸಹಕಾರಿಯಾಗುತ್ತವೆ. ರೀತಿಯ ಕ್ರಮಗಳಿಂದ ಮಲೇಶಿಯಾದ ಕೆಲವು ಭಾಗಗಳಲ್ಲಿ ನಿಪಾಹ್ ವನ್ನು ಹತ್ತಿಕ್ಕಲು ಸಾಧ್ಯವಾಗಿದೆ. ಇದರೊಂದಿಗೆ ನಿಪಾಹ್ ಕುರಿತಾಗಿ ಎಲ್ಲರಲ್ಲಿ ಅರಿವು ಮೂಡಿಸುವುದು ಸಹ ಅತ್ಯವಶ್ಯಕವಾಗಿದೆ. ಸೋಂಕಿತರೊಂದಿಗೆ ಇರುವಾಗ ಕೆಲವು ಸುರಕ್ಷತಾ ಕ್ರಮಗಳನ್ನು ನಾವು ವಹಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾದುವು: ಸೋಂಕಿತರೊಂದಿಗೆ ಅಸುರಕ್ಷಿತ ನೇರ  ಭೌತಿಕ ಸಂಪರ್ಕ ಇಟ್ಟುಕೊಳ್ಳದಿರುವುದು; ಕೈಗಳನ್ನು ನಿರಂತರವಾಗಿ ಸಾಬೂನಿನಿಂದ ತೊಳೆದುಕೊಳ್ಳುವುದು; ರೋಗಿಗಳೊಂದಿಗೆ ಆಹಾರ-ಪಾನೀಯಗಳನ್ನು ಹಂಚಿಕೊಳ್ಳದಿರುವುದು; ಹಣ್ಣುಗಳನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆಯುವುದು ಮತ್ತು ಸಿಪ್ಪೆಯನ್ನು ಸುಲಿಯುವುದು. ಹಾಗೆಂದು ನಿಪಾಹ್ ಎಚ್೧ಎನ್೧ ಅಥವಾ ಸಾರ್ಸ್ ರೋಗದಂತೆ ಗಾಳಿಯಲ್ಲಿ ಹರಡುವುದಿಲ್ಲ. ಆದುದರಿಂದ, ಎಲ್ಲಾ ಕ್ರಮಗಳನ್ನು ಸಂಧರ್ಭವನ್ನು ಅರಿತು ಪಾಲಿಸಬೇಕೇ ಹೊರತು ಅನಾವಶ್ಯಕ ಧೈರ್ಯಗೆಡುವ ಅಗತ್ಯವಿಲ್ಲಾ ಎಂಬುದು ಅಷ್ಟೇ ಸತ್ಯ.


- ರೋಹಿತ್ 




ಕಾದು ನೋಡಿ

ಹೊಸ ಅಂಕಣ...

"ತೀರ"


ಆತ್ಮೀಯ ಒಡನಾಡಿಗಳೇ,


೨೦೧೦-೨೦೧೧ ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ವಿಶೇಷವಾಗಿ ಮಾಡಲ್ಪಟ್ಟ "ತೀರ" ಎಂಬ ವೀಡಿಯೋ ತುಣುಕನ್ನು ಈ ಮೂಲಕ ನಮ್ಮ ಬ್ಲಾಗ್ ನಲ್ಲಿ upload ಮಾಡುತ್ತಿದ್ದೇವೆ. ನಮ್ಮ ವಿಭಾಗದಲ್ಲಿನ ದಿನಗಳ ನೆನಪನ್ನ ಮತ್ತೆ ನಿಮ್ಮಲ್ಲಿಗೆ ತರುವಂತಹ ಒಂದು ಪುಟ್ಟ ಪ್ರಯತ್ನವು ಇದಾಗಿದ್ದು, ನಿಮ್ಮೆಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂದು ನಂಬಿದ್ದೇವೆ.


ನಿಮ್ಮ ಪ್ರತಿಯೊಂದು ಅನಿಸಿಕೆಗಳಿಗೂ ಆದರದ ಸ್ವಾಗತ.



ಈ ವೀಡಿಯೊ ತುಣುಕನ್ನು ತಯಾರಿಸಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಈ ಮೂಲಕ ಧನ್ಯವಾದವನ್ನು ಅರ್ಪಿಸುತ್ತೇವೆ.


- ರೋಹಿತ್

ತೀರ ಭಾಗ - 1

ತೀರ ಭಾಗ - 2

ತೀರ ಭಾಗ - 3

ನನ್ನ ಬೆರಳಿನೊಡನೆ ಆಡಿದ ಕನಯ್ಯ...

ನನ್ನ ಬೆರಳಿನೊಡನೆ ಆಡಿದ ಕನಯ್ಯ...